ವಿಮಾನ
	ವಾಯುವಿಗಿಂತ ಭಾರವಾಗಿದ್ದು ಯಂತ್ರಶಕ್ತಿಯ ನೂಕುಬಲದಿಂದ ವಾಯುಮಂಡಲದಲ್ಲಿ ಚಲಿಸುವ ವಾಹನ (ಏರೊಪ್ಲೇನ್). ವಾಯುಫಲಕಗಳಂಥ ವ್ಯವಸ್ಥೆಯ ಸಹಾಯದಿಂದ ಹಾಗೂ ವಾಯುವಿನ ಚಲನಾತ್ಮಕ ಪ್ರತಿಕ್ರಿಯೆಯಿಂದ ಉತ್ಥಾಪಕ ಬಲ  ಪಡೆಯುತ್ತದೆ. ಇದರ ಮುಖ್ಯ ಭಾಗಗಳು: 1. ಪ್ಲಾವನದ (ಫ್ಲೈಟ್) ವೇಳೆ ವಿಮಾನ ಕೆಳಗೆ ಬೀಳದಂತೆ ಆಧರಿಸುವ ರೆಕ್ಕೆಗಳ ವ್ಯವಸ್ಥೆ.  2. ರೆಕ್ಕೆಗಳಿಗೆ ಸ್ಥಿರತೆ ಒದಗಿಸಲು ಯುಕ್ತ ಹಿಂಚಾಚುವಿನ ಮೇಲ್ಮೈಗಳು. 3. ವಿಮಾನ ಹಾರಾಟದಲ್ಲಿರುವಾಗ ಅದರ ಉನ್ನತಿಯನ್ನು ನಿಯಂತ್ರಿಸಲು ಅನುವಾಗುವ ಏಲಿರಾನ್‍ಗಳು, ವಾಯುಫಲಕಗಳು, ಚುಕ್ಕಾಣಿ, ಮಡಿಪುಗಳು ಮುಂತಾದ ಚಲನಶೀಲಭಾಗಗಳು. 4. ವಿಮಾನ ಚಲಿಸಲು ಬೇಕಾಗುವ ನೂಕುಬಲವನ್ನು ಪಡೆಯಲು ಶಕ್ತ್ಯುತ್ಪಾದಕ ಯಂತ್ರ. 5. ವಿಮಾನ ಬಾನಿಗೆ ಏರುವಾಗ ಮತ್ತೆ ನೆಲಕ್ಕಿಳಿಯುವಾಗ ಹಾಗೂ ಚಲಿಸದೆ ನೆಲದಮೇಲೆ ನಿಂತಿರುವಾಗ ಅದರ ಸಮತೊಲ ಕಾಯ್ದುಕೊಳ್ಳಲು ಯುಕ್ತವಾದ ಆನಿಕೆಗಳು. 6. ಸಿಬ್ಬಂದಿ, ಪ್ರಯಾಣಿಕರು ಮತ್ತು ಸಾಮಾನುಗಳಿಗಾಗಿ ಸಮರ್ಪಕ ಗಾತ್ರ ಹಾಗೂ ವಿನ್ಯಾಸದ ಫ್ಯೂಸ್‍ಲೇಜ್. 7. ವಿಮಾನಚಾಲಕ ಕುಳಿತು ಅದನ್ನು ನಿಯಂತ್ರಿಸಿ  ಸಂಚಾಲನೆ ಮಾಡಲು ಹಾಗೂ ವಿಮಾನಚಾಲನ ಪ್ರಕ್ರಿಯೆಗೆ ಅನುವಾಗುವ ಹಲವು ನಿಯಂತ್ರಕಗಳು ಮತ್ತು ಉಪಕರಣಗಳನ್ನಿಡಲು ಉಪಯುಕ್ತ ವಿನ್ಯಾಸವಿರುವ ಕಾಕ್‍ಪಿಟ್.

	ರಚನಾ ಸಾಮಗ್ರಿಗಳು: ವಿಮಾನಯಾನದ ಪ್ರಾರಂಭಿಕ ಕಾಲದಲ್ಲಿ ಮರಮುಟ್ಟು ಮತ್ತು ಬಟ್ಟೆಯನ್ನು ಉಪಯೋಗಿಸಿ ಅದರ ಒಡಲನ್ನು ರಚಿಸಲಾಗುತ್ತಿತ್ತು, ಹಾಗೂ ತಂತಿಗಳು, ಮೂಲೆಪಟ್ಟಿಗಳು ಬಿಗಿಪಟ್ಟಿಗಳು ಇತ್ಯಾದಿಗಳಿಂದ ಅದರ ಚೌಕಟ್ಟಿಗೆ ಬಲ ಒದಗಿಸಲಾಗುತ್ತಿತ್ತು. ಮುಂದೆ ವಿಮಾನಯಾನದ ವೇಗ ಹೆಚ್ಚಿದಂತೆಲ್ಲ ಹಗುರ ಮತ್ತು ಶಕ್ತಿಶಾಲಿಯಾಗಿರುವ ಇತರ ಪದಾರ್ಥಗಳ ಆವಶ್ಯಕತೆ ಎದುರಾಯಿತು. ಮೇಲಾಗಿ ಮರ ಮತ್ತು ಬಟ್ಟೆಯಂಥ ಪದಾರ್ಥಗಳನ್ನು ಸುಸ್ಥಿಯಲ್ಲಿಡುವುದೂ ಕಷ್ಟವಾಗಿತ್ತು. ಆದ್ದರಿಂದ ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-18) ಉಕ್ಕಿನ ಕೊಳವೆಗಳೂ ಅಲ್ಯೂಮಿನಿಯಮ್‍ನ ಹೊದಿಕೆಯೂ ಬಳಕೆಗೆ ಬಂದುವು. 

	ಮುಂದಿನ ಸು. 15 ವರ್ಷಗಳ ಕಾಲ (1919-34) ವಿಮಾನ ನಿರ್ಮಾಣದಲ್ಲಿ ಸಂಪೂರ್ಣವಾಗಿ ಲೋಹದ ಬಳಕೆ ಪ್ರಾರಂಭವಾಯಿತು. ನಿರ್ಮಾಣಕೌಶಲ್ಯದಲ್ಲಿ ಅಭಿವೃದ್ಧಿಯೂ ಕಂಡುಬಂತು. ಅಲ್ಯೂಮಿನಿಯಮ್ ಹಾಗೂ ಹಲವು ಮಿಶ್ರಲೋಹಗಳೂ ಬಳಕೆಗೆ ಬಂದುವು. ಆದರೆ ಲೋಹಗಳ ಆಯಾಸ ಹಾಗೂ ಸಂಕ್ಷಾರಕ ಗುಣಗಳು ಋಣಾತ್ಮಕವಾಗಿ ದ್ದುವು. ಅಪಾಯ ನಿವಾರಿಸಲು ಹೊಸವಿಧಾನಗಳ ಶೋಧನೆ ಆಯಿತು. ಅನೇಕ ಹೊಸ ಮಿಶ್ರಲೋಹಗಳೂ ವಿರಳ ಲೋಹಗಳಾದ ಮಾಲಿಬ್ಡಿನಮ್ ಮತ್ತು ಟೈಟಾನಿಯಮ್‍ಗಳೂ ಬಳಕೆಗೆ ಬಂದುವು. ಅಲ್ಲಿಯೂ ಅತ್ಯಧಿಕ ಉಷ್ಣನಿರೋಧಕ ಶಕ್ತಿಯ ಅಗತ್ಯವಿರುವಲ್ಲಿ ಈ ಲೋಹಗಳು ಉಪಯುಕ್ತ ಎನಿಸಿದುವು. 

	ಅಧಿಧ್ವನಿಕ (ಸೂಪರ್‍ಸಾನಿಕ್) ವಿಮಾನಗಳ ವೇಗ ಮ್ಯಾಕ್ 3 ಅಥವಾ ಅದಕ್ಕಿಂತ ಹೆಚ್ಚಾದಾಗ ವಾಯುಚಲನೆಯಿಂದ ಉಂಟಾಗುವ ಉಷ್ಣದ ಪರಿಣಾಮಗಳಿಂದ ಪಾರಾಗಲು ಅತ್ಯಾಧುನಿಕ ಕಾರ್ಬನ್ ಮತ್ತು ಕಾರ್ಬನ್ ಸಂಯುಕ್ತಗಳು ಸಿಲಿಕಾನ್-ಕಾರ್ಬೈಡ್-ಸಿರಾಮಿಕ್ ಲೇಪಗಳು, ಟೈಟಾನಿಯಮ್, ಅಲ್ಯೂಮಿನಿಯಮ್ ಮಿಶ್ರಲೋಹಗಳು, ಸಿರಾಮಿಕ್ ತಂತುಗಳಿಂದ ಬಲಗೊಳಿಸಲ್ಪಟ್ಟ ಟೈಟಾನಿಯಮ್ ಮಿಶ್ರಲೋಹಗಳು ಮುಂತಾದವುಗಳ ಬಳಕೆ ಆರಂಭವಾಯಿತು. ಇವಲ್ಲದೆ ಕೆಲವು ಸಂಧಿಸ್ಥ ಭಾಗಗಳಲ್ಲಿ ವಾಯುಗತಿಯಿಂದ ಉದ್ಭವಿಸುವ ಉಷ್ಣತೆಯಿಂದ ರಕ್ಷಿಸಲು ಶೀತ ಹೈಡ್ರೊಜನ್ ಅನಿಲದ ಪರಿಚಲನೆಯನ್ನೂ ಅಳವಡಿಸಲಾಯಿತು. 

	ಗಣಕ ತಂತ್ರವಿದ್ಯೆ ಹಾಗೂ ಹಲವಾರು ಸಂಯುಕ್ತಗಳ ಉಪಜ್ಞೆಯಿಂದ ವಾಣಿಜ್ಯೋದ್ದೇಶದ ಬೃಹದ್ವಿಮಾನಗಳ ರಚನೆಯಲ್ಲಿ ಅದ್ಭುತ ಕ್ರಾಂತಿ ತಲೆದೋರಿತು. ರೇಡಾರ್‍ಗಳಿಂದ ಗುರುತಿಸುವ ಸಾಧ್ಯತೆ ಕಡಿಮೆಯಿರುವ ಕೆಲವು ಸಂಯುಕ್ತಗಳನ್ನು ಯುದ್ಧವಿಮಾನಗಳಲ್ಲಿ ಬಳಸಲು ಪ್ರಾರಂಭಿಸಿದರು. ಬೋಯಿಂಗ್-74ರಂಥ ಬೃಹದ್ಗಾತ್ರದ ವಿಮಾನಗಳೂ ಕಾಂಕಾರ್ಡ್‍ನಂಥ ಅತಿ ವೇಗದ ವಿಮಾನಗಳೂ ರಂಗಪ್ರವೇಶಿಸಿದುವು. 21ನೆಯ ಶತಮಾನದ ಪ್ರಾರಂಭದಲ್ಲಿ ಕಾಂಕಾರ್ಡ್ ಯೋಜನೆಗೆ ಹಿನ್ನಡೆಯುಂಟಾದರೂ ವಿಮಾನಯಾನ ಎಂಜಿನಿಯನಿರಿಂಗ್, ವಾಯುಗತಿ ವಿಜ್ಞಾನ ಮತ್ತು ವೈಮಾಂತರಿಕ್ಷ ಎಂಜಿಯರಿಂಗ್ ಕ್ಷೇತ್ರಗಳಲ್ಲಿ ಹೊಸ ತಂತ್ರವಿದ್ಯೆಗಳ ಉಪಜ್ಞೆಯಿಂದಾಗಿ ಗಾತ್ರ ಹಾಗೂ ವೇಗದಲ್ಲಿ ಈ ವಿಮಾನಗಳನ್ನೂ ಮೀರಿಸುವಂಥವು ಗಗನಮಂಡಲಮಧ್ಯದಲ್ಲಿ ಹಾರುವುದನ್ನು ಅನತಿಕಾಲದಲ್ಲೇ ಆಕಾಶದಲ್ಲಿ ನೋಡಬಹುದು. 
	
ವಿಮಾನಚಾಲನೆ ಮತ್ತು ನಿಯಂತ್ರಣ: ಉತ್ಥಾಪಕ ಬಲ, ನೂಕುಬಲ, ಜಗ್ಗುಬಲ, ತೂಕ ಎಂಬ ನಾಲ್ಕು ಬಲಗಳು ವಿಮಾನ ಪ್ಲಾವನದ ವೇಳೆ ನಿರಂತರವಾಗಿ ಅಂತರವರ್ತಿಸುತ್ತಿರುವುವಲ್ಲದೆ ಇವನ್ನು ನೋದಕದ (ಪ್ರೊಪೆಲರ್) ಭ್ರಾಮಕ ಪರಿಣಾಮ (ಟಾರ್ಕ್), ಕೇಂದ್ರಾಪಗಾಮಿ ಬಲ ಹಾಗೂ ಇನ್ನಿತರ ಬಲಮೂಲಗಳು ಬಾಧಿಸುತ್ತಿರುತ್ತವೆ. ವಿಮಾನಚಾಲಕ ಇವನ್ನೆಲ್ಲ ನಿಯಂತ್ರಿಸಿ ಸಮನ್ವಯ ಸಾಧಿಸಿ ವಿಮಾನಚಾಲನೆ ಮಾಡಬೇಕಾಗುತ್ತದೆ. 

	ಪಾರಂಪರಿಕ ವಿಮಾನಗಳಲ್ಲಿ ಚಾಲಕನ ಮುಂದಿರುವ ನಿಯಂತ್ರಣ ಸ್ತಂಭದಲ್ಲಿ ಒಂದು ದಂಡ ಅಥವಾ ಚಕ್ರ ಮತ್ತು ಚುಕ್ಕಾಣಿಯನ್ನು ನಿಯಂತ್ರಿಸುವ ಕಾಲುಮೆಟ್ಟು ಇರುತ್ತವೆ. ಇವುಗಳ ಸಹಾಯದಿಂದ ಚಾಲಕ ಮೇಲೆತ್ತುಗ (ಎಲಿವೇಟರ್) ಏಲಿರಾನ್ ಮತ್ತು ಚುಕ್ಕಾಣಿಗಳನ್ನು ನಿಯಂತ್ರಿಸುತ್ತಾನೆ. ಆಧುನಿಕ ವಿಮಾನಗಳಲ್ಲಿ ದ್ರವಚಾಲಿತ ಅಥವಾ ವಿದ್ಯುಚ್ಚಾಲಿತ ವ್ಯವಸ್ಥೆಯಿಂದ ಈ ನಿಯಂತ್ರಣ ಸಾಧಿಸಲಾಗುತ್ತದೆ. 

	ನಿಯಂತ್ರಣಸ್ತಂಭವನ್ನು ಮುಂದಕ್ಕೆ ನೂಕಿದರೆ ಮೇಲೆತ್ತುಗ ಇಳಿದು ವಿಮಾನದ ಮೂಲೆ ಕೆಳಕ್ಕೆ ಬಾಗುತ್ತದೆ. ಹಾಗೂ ಹಿಂಚಾಚು ಮೇಲಕ್ಕೆ ಎತ್ತುತ್ತದೆ. ನಿಯಂತ್ರಣದ ಸ್ತಂಭವನ್ನು ಹಿಂದಕ್ಕೆಳೆದರೆ ಮೇಲೆತ್ತುಗ ಏರಿ ಮೂಲೆ ಮೇಲ್ಮೊಗವಾಗಿ ಹಿಂಚಾಚು ಕೆಳಮೊಗವಾಗುತ್ತದೆ. 

	ಏಲಿರಾನ್‍ಗಳಿಗೆ ಚಲನಶೀಲ ಮೇಲ್ಮೈಗಳಿವೆ. ಇವನ್ನು ರೆಕ್ಕೆಗಳ ಹಿಂಬದಿಗೆ ತಿರುಗಣಿಕೀಲಿನಿಂದ ಜೋಡಿಸಲಾಗಿದೆ. ಎರಡು ರೆಕ್ಕೆಗಳಲ್ಲಿರುವ ಏಲಿರಾನ್‍ಗಳು ಯಾವಾಗಲೂ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ವಿಮಾನ ತನ್ನ ನೀಳ ಅಕ್ಷದ ಆಚೀಚೆ ತಿರುಗಲು ಸಹಾಯ ಮಾಡುತ್ತವೆ. ನಿಯಂತ್ರಣಸ್ತಂಭವನ್ನು ಎಡಕ್ಕೆ ನೂಕಿದರೆ ಬಲರೆಕ್ಕೆಯ ಏಲಿರಾನ್ ಕೆಳಕ್ಕೂ ಎಡರೆಕ್ಕೆಯದು ಮೇಲಕ್ಕೂ ಬಾಗುತ್ತವೆ. ಇದರಿಂದಾಗಿ ವಾಯುಪ್ರವಾಹದಲ್ಲಿ ಏರುಪೇರು ಉಂಟಾಗಿ ಬಲರೆಕ್ಕೆ ಮೇಲಕ್ಕೂ ಎಡರೆಕ್ಕೆ ಕೆಳಕ್ಕೂ ಬಾಗಿ ವಿಮಾನ ಎಡಕ್ಕೆ ತಿರುಗುತ್ತದೆ. 

	ವಿಮಾನದ ಚುಕ್ಕಾಣಿ ಊಧ್ರ್ವಾಕ್ಷದ ಸುತ್ತ ವಿಮಾನಚಲನೆಯನ್ನು ನಿಯಂತ್ರಿಸುತ್ತದೆ. ಚುಕ್ಕಾಣಿಯೇ ವಿಮಾನವನ್ನು ಅತ್ತಿತ್ತ ತಿರುಗಿಸುವುದಿಲ್ಲವಾದರೂ ಅತ್ತಿತ್ತ ತಿರುಗಿಸಿದಾಗ ಊಧ್ರ್ವಾಕ್ಷವನ್ನು ಕುರಿತಂತೆ ಉಂಟಾಗುವ ಕೋನೀಯ ಚಲನೆಯನ್ನು ನಿಯಂತ್ರಿಸುತ್ತದೆ. ರೆಕ್ಕೆ ಕೆಳಕ್ಕೆ ಬಾಗಿದಾಗ ಉತ್ಥಾಪನಬಲ ಮತ್ತು ಜಗ್ಗುಬಲಗಳು ಕಡಿಮೆಯಾದರೂ ಇನ್ನೊಂದು ರೆಕ್ಕೆ ಮೇಲೆ ಬಾಗಿದಾಗ ಇವೆರಡು ಬಲಗಳೂ ಹೆಚ್ಚಾಗಿ ಹೆಚ್ಚಿದ ಜಗ್ಗುಬಲ ವಿಮಾನದ ಮೂಲೆಯನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತದೆ. ಆಗ ಚುಕ್ಕಾಣಿಯ ಕಾಲುಮೆಟ್ಟಿನ ಮೇಲೆ ಒತ್ತಡ ತಂದು ಯಾ ಎಂಬ ಈ ದುಷ್ಪರಿಣಾಮವನ್ನು ನಿಯಂತ್ರಿಸಬೇಕಾ ಗುತ್ತದೆ. ಇದರಂದಾಗಿ ಒಟ್ಟು ಉತ್ಥಾಪನಬಲ ಕಡಿಮೆಯಾಗುವುದನ್ನು ಮೇಲೆತ್ತುಗದ ಸಹಾಯದಿಂದ ನಿಯಂತ್ರಿಸುತ್ತಾರೆ. ಹಾರಾಟದಲ್ಲಿ ಓರಣ ವುಂಟಾಗಲು ಸತತ ಬಲು ಸೂಕ್ಷ್ಮವಾಗಿ ಇವನ್ನು ನಿಯಂತ್ರಿಸುತ್ತಿರಬೇಕು. 

	ಎಂಜಿನ್ ಮೇಲಿನ ಹತೋಟಿಯಿಂದ ಚಾಲಕ ವಿಮಾನದ ನೂಕುಬಲವನ್ನು ನಿಯಂತ್ರಿಸುತ್ತಾನೆ. ಆದರೆ ಈ ನಿಯಂತ್ರಣವಿಧಾನಗಳು ಪ್ರತ್ಯಾಗಮನ ಎಂಜಿನ್, ಟರ್ಬೋಜೆಟ್ ಎಂಜಿನ್ ಮತ್ತು ಟರ್ಬೋಪ್ರಾಪ್ ಎಂಜಿನುಗಳಲ್ಲಿ ಬೇರೆಬೇರೆ ತೆರನಾಗಿರುತ್ತದೆ. ಇವಲ್ಲದೆ ವಾಯುವಿನ ವೇಗ, ಉಷ್ಣತೆ, ತೇವಾಂಶ, ಒತ್ತಡ ಮುಂತಾದ ಹವಾಮಾನಕ್ಕೆ ಸಂಬಂಧಿಸಿದ ವಿವರಗಳನ್ನು ಸತತವೂ ಗಮನಿಸುತ್ತಿರಬೇಕಾಗುತ್ತದೆ. 

	ನೋದಕಗಳು ಮೂಲತಃ ಆವರ್ತಿಸುವ ವಾಯುಫಲಕಗಳು. ಸ್ಥಿರ ಅಂತರದ ಎರಡು ದಳಗಳು, ಚರ ಅಂತರದ ನಾಲ್ಕು ದಳಗಳು ಹಾಗೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಆವರ್ತಿಸಬಲ್ಲ ಎಂಟು ದಳಗಳು ಉಳ್ಳ ವಿವಿಧ ನೋದಕಗಳಿವೆ. ಇವುಗಳಲ್ಲಿ ಸ್ಥಿರ ಅಂತರದ ಎರಡು ದಳಗಳ ನೋದಕಗಳ ನಿರ್ವಹಣೆ ಸೀಮಿತವಾಗಿರುತ್ತದೆ. ಆದರೆ ಚಂಚಲ ಅಂತರದ ನೋದಕದಳಗಳ ಅಂತರವನ್ನು ಚಾಲಕ ಹಾರಾಟದ ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಬಹುದಾಗಿದೆ. ಕೆಲವು ವಿಮಾನಗಳಲ್ಲಿ ವಿಮಾನ ಭೂಸ್ಪರ್ಶ ಮಾಡಿದೊಡನೆ ನೋದಕಗಳನ್ನು ವಿರುದ್ಧ ದಿಕ್ಕಿಗೆ ಆವರ್ತಿಸುವಂತೆ ಮಾಡಿ ವಿಮಾನ ಚಲನರಹಿತ ಸ್ಥಿತಿಗೆ ಬರಲು ಬೇಕಾಗುವ ದೂರವನ್ನು ಕಡಿಮೆ ಮಾಡುವ ವ್ಯವಸ್ಥೆಯಿದೆ. 

	ವಿಮಾನದ ಜಗ್ಗುಬಲ ಹೆಚ್ಚುಕಡಿಮೆ ಮಾಡಿ ನಿಯಂತ್ರಿಸಲು ರೆಕ್ಕೆಗಳಲ್ಲಿ ಮಡಿಪುಗಳನ್ನು (ಫ್ಲ್ಯಾಪ್) ಅಳವಡಿಸಿದೆ. ಇವುಗಳಲ್ಲಿ ರೆಕ್ಕೆಗಳ ಹಿಂಬದಿಯ ಮಡಿಪುಗಳಿಗೆ ಎದುರುಬದಿಯವಕ್ಕೆ ಸ್ಲ್ಯಾಟ್ ಎಂದೂ ಹೆಸರು. ಇವುಗಳಿಗೆ ಗರಿಷ್ಠ 450ಗಳಷ್ಟು ಬಾಗುವ ಸೌಕರ್ಯವಿದ್ದು ಇವುಗಳ ಯುಕ್ತ ನಿಯಂತ್ರಣದಿಂದ ವಿಮಾನ ಇಳಿಯುವಾಗ ಹೆಚ್ಚು ಜಗ್ಗುಬಲವನ್ನೂ ಏರುವಾಗ ಅಧಿಕ ಉತ್ಥಾಪಕ ಬಲವನ್ನೂ ಪಡೆಯಲು ಅನುಕೂಲವಾಗುತ್ತದೆ. 

	ಇತ್ತೀಚಿನ ದಶಕಗಳಲ್ಲಿ ನಡೆದ ಗಣಕ ತಂತ್ರವಿದ್ಯೆಯಲ್ಲಿಯ ಅದ್ಭುತ ಕ್ರಾಂತಿಯಿಂದ ಈಗ ವಿಮಾನಚಾಲಕನ ಪಾತ್ರ ಬದಲಾಗಿದೆ. ಕಾಕ್‍ಪಿಟ್‍ನ ತುಂಬ ಹಲವಾರು ಉಪಕರಣಗಳು, ಸೂಚಕಗಳು, ಫಲಕಗಳು, ಕೀಲಿಮಣೆಗಳು, ಒತ್ತುಗುಂಡಿಗಳು ತುಂಬಿರುತ್ತವೆ. ಭೂಸ್ಥಿರ ಕಕ್ಷೆಯಲ್ಲಿರುವ ಉಪಗ್ರಹಗಳಿಂದ ನಿರಂತರವಾಗಿ ಹವಾಮಾನದ ಸ್ಥಿತ್ಯಂತರಗಳು, ಸುಂಟರಗಾಳಿ, ಮಳೆ, ಹಿಮಪಾತ, ವಿಮಾನನಿಲ್ದಾಣಗಳಲ್ಲಿ ಗೋಚರತೆಯ ಸ್ಥಿತಿ ಇತ್ಯಾದಿ ಮಾಹಿತಿಗಳು ಸಿಗುತ್ತಿರುತ್ತವೆ. ವಿಮಾನ ಉಡ್ಡಯನ ಪ್ರಾರಂಭಿಸಿ ಗುರಿಮುಟ್ಟುವ ತನಕ ಆಟೋಪೈಲಟ್ ಎಂಬ ಸ್ವಯಂಚಾಲಿತ ವ್ಯವಸ್ಥೆಯ ಅಧೀನದಲ್ಲಿರುತ್ತದೆ. ಆದ್ದರಿಂದ ಇಂದಿನ ವಿಮಾನಚಾಲಕ ಈ ಆಧುನಿಕ ವ್ಯವಸ್ಥೆಯ ಕುಶಲನಿರ್ವಾಹಕನೂ ನಿಪುಣತಂತ್ರಜ್ಞನೂ ಆಗಿರಬೇಕು. 

	ಪ್ಲಾವನ ಛದ್ಮಕಗಳು ಅಥವಾ ಅನುಕಾರಕಗಳು: ಇಂದು ವಿಮಾನ ಚಾಲಕರಿಗೆ ನೀಡುವ ತರಬೇತಿಯಲ್ಲಿ ಪ್ಲಾವನ ಅನುಕಾರಕಗಳೂ (ಫ್ಲೈಟ್)ಸೇರಿವೆ. ಇಲ್ಲಿ ಪ್ರಯೋಗಶಾಲೆಯಲ್ಲಿರುವ ಯಥಾವತ್ ಅನುಕಾರಕ ಕಾಕ್‍ಪಿಟ್‍ನಲ್ಲಿ ಕುಳಿತು ಚಾಲಕ ವಿಮಾನಯಾನದ ಅನುಭವ ಪಡೆಯುತ್ತಾನೆ. ಇಲ್ಲಿ ನೀಡುವ ತರಬೇತಿ ತುರ್ತು ಸ್ಥಿತಿಗಳನ್ನೆದುರಿಸುವಲ್ಲಿ ಸಹಾಯಕವಾಗುತ್ತದೆ. ಏಕೆಂದರೆ ಈ ತರಬೇತಿಯನ್ನು ನಿಜವಾದ ಹಾರಾಟದಲ್ಲಿ ನೀಡಲು ಸಾಧ್ಯವಾಗುವುದಿಲ್ಲ.		
		(ಜಿ.ಆರ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ